ಪಿರೋಕೋರಿಡೀ
ಸಂಧಿಪದಿ ವಂಶದ ಕೀಟ ವರ್ಗ, ಹೆಮಿಪ್ಟರ ಗಣ ಮತ್ತು ಹೆಟರಾಪ್ಟರ ಉಪಗಣಕ್ಕೆ ಸೇರಿದ ಒಂದು ಕುಟುಂಬ. ಈ ಕುಟುಂಬದ ಕೀಟಗಳನ್ನು ಸಸ್ಯತಿಗಣೆಗಳೆಂದು ಕರೆಯುವುದುಂಟು. ಇವು ಹೆಚ್ಚಾಗಿ ಹತ್ತಿಯ ಗಿಡಗಳಲ್ಲಿ ವಾಸ ಮಾಡುತ್ತವೆ. ಗಾತ್ರದಲ್ಲಿ ಇವು ಅತಿ ಚಿಕ್ಕವು, 9-11 ಮಿ. ಮೀ. ಉದ್ದವಿರುತ್ತವೆ. ದೇಹದಲ್ಲಿ ತಲೆ, ವಕ್ಷ ಹಾಗೂ ಉದರವೆಂಬ ಮೂರು ಭಾಗಗಳುಂಟು. ತಲೆ ಮೇಲ್ಮುಖವಾಗಿ ಬಾಗಿದೆ. ಇದರಲ್ಲಿ 4 ಖಂಡಗಳ ಎರಡು ಆಂಟೆನಗಳೂ, ಸೂಕ್ಷ್ಮ ಗಾತ್ರದ ಕಣ್ಣುಗಳೂ ಇವೆ. ವಕ್ಷದಲ್ಲಿ ಮೂರು ಜೊತೆ ಕಾಲು, ಎರಡು ಜೊತೆ ರೆಕ್ಕೆಗಳು ಉಂಟು, ರೆಕ್ಕೆಗಳು ಆರ್ಧ ಮಂದ ಹಾಗೂ ಅರ್ಧ ತೆಳುವಾಗಿದ್ದು, ದ್ವಿರೂಪವನ್ನು ತೋರುವವು. ಈ ತಿಗಣೆಗಳು ಹತ್ತಿಯ ಬಿಳಿಯ ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವ ವಿಚಿತ್ರ ಲಕ್ಷಣವನ್ನು ಪ್ರದರ್ಶಿಸುವುವು. ವೆಸ್ಟ್ ಇಂಡೀಸ್‍ನಲ್ಲಿ ಇವನ್ನು ಹತ್ತಿಗೆ ಬಣ್ಣ ಕೊಡುವ ತಿಗಣೆಗಳೆಂದು ಕರೆಯುತ್ತಾರೆ. ಇವು ತಾವಾಗಿಯೇ ಹತ್ತಿಯ ಬಣ್ಣವನ್ನು ಕೆಡಿಸುವುದಿಲ್ಲ.  ನಿಯಾಟೊಸ್ಪೋರ ಎಂಬ ಬೂಸ್ಟನ್ನು ತಮ್ಮ ಶರೀರದ ಮೂಲಕ ಸಾಗಿಸುವುವು.  ಹತ್ತಿಯ ಬಣ್ಣ ಈ ಬೂಸ್ಟಿನ ಪ್ರಭಾವದಿಂದ ಕೆಡುತ್ತದೆ. ಈ ತಿಗಣೆಗಳ ಶರೀರದಿಂದ ಒಂದು ರೀತಿಯ ದುರ್ವಾಸನೆ ಹೊರಸೂಸುತ್ತದೆ. ಆದ್ದರಿಂದ ಇವನ್ನು ದುರ್ವಾಸನೆ ತಿಗಣೆಗಳೆಂದು ಕರೆಯುವುದೂ ಉಂಟು. ಪಿರೋಕೋರಿಸ್ ಮತ್ತು ಡಿಸ್‍ಡರ್‍ಕಸ್ ಎಂಬವು ಈ ಗುಂಪಿನ ಮುಖ್ಯ ಉದಾಹರಣೆಗಳು.
(ಕೆ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ